ಅತ್ಯಾಚಾರಿ ಆರೋಪಿಗೆ ಪೊಲೀಸರ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಅ.12- ಎಂಟು ವರ್ಷದ ಬಾಲಕಿ ಮೇಲೆ ನೆರೆಮನೆಯ ವಯಸ್ಕನೊಬ್ಬ ಅತ್ಯಾಚಾರವೆಸಗಿದ ಘಟನೆ ಕಳೆದ ರಾತ್ರಿ ನಡೆದಿದ್ದು, ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.  ಊರಿಗಾಂಪೇಟೆಯ ಬಳಿ ಇರುವ ಮಂಜುನಾಥ್ ನಗರದ ಜನತಾ ಕಾಲೋನಿಯಲ್ಲಿ ಎಂಟು ವರ್ಷದ ಬಾಲಕಿ ಮೇಲೆ 26 ವರ್ಷದ ಕುಟ್ಟಿ ಆಲಿಯಾಸ್ ತಮಿಳರಸನ್ ಅತ್ಯಾಚಾರ ಮಾಡಿದ್ದಾನೆ.

ಬಾಲಕಿಯ ತಾಯಿ ಚೀಟಿ ಹಣ ಕಟ್ಟಲು ಸಮೀಪದ ಮನೆಯೊಂದಕ್ಕೆ ಹೋಗಿದ್ದಾಗ, ಮನೆಯಲ್ಲಿ ಮಗುವೊಂದೇ ಇದ್ದಿತ್ತು. ಈ ಸಮಯ ನೋಡಿಕೊಂಡ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ರಾತ್ರಿ ಬಾಲಕಿ ಅಸ್ವಸ್ಥಗೊಂಡಿದ್ದನ್ನು ಗಮನಿಸಿ ತಾಯಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಗುವನ್ನು ರಾಬರ್ಟಸನ್‍ಪೇಟೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ತೋರಿಸಿದಾಗ, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಊರಿಗಾಂಪೇಟೆಯಲ್ಲಿ ಜಾಲಾಡಿದರು. ಬಡಾವಣೆಯ ಹೊರವಲಯದ ಯರನಾಗನಹಳ್ಳಿ ರಸ್ತೆಯಲ್ಲಿ ಸಿಕ್ಕ ಆತ್ಯಾಚಾರಿಯನ್ನು ಬಂಧಿಸಲು ಹೋದಾಗ, ಕಲ್ಲಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಕಾನ್ಸಟೇಬಲ್ ಮುನಿಸ್ವಾಮಿ ಗಾಯಗೊಂಡಿದ್ದು, ತಕ್ಷಣ ಸರ್ಕಲ್ ಇನ್ಸ್‍ಪೆಕ್ಟರ್ ಸೂರ್ಯಪ್ರಕಾಶ್ ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಸೂಚಿಸಿದರು.

ಪುನಃ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಕಾಲಿಗೆ ತಗುಲಿದೆ. ಆರೋಪಿಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ರಾಬರ್ಟಸನ್‍ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Facebook Comments