ಈ ದೇಶದಲ್ಲಿ ಕೋವಿಡ್-19 ನಿಯಮ ಉಲ್ಲಂಘಿಸಿದರೆ ಸೀದಾ ಜೈಲಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಗಾಪುರ , ಅ.20- ಮಾಸ್ಕ್ ಧರಿಸಲಿಲ್ಲಾ ಎಂದರೆ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸದಿದ್ದರೆ, ದೂಸ್ರಾ ಮಾತಾಡಿದರೆ ಸೀದಾ ಜೈಲಿಗೆ. ಇದು ಸಿಂಗಾಪೂರ್‍ನಲ್ಲಿರುವ ನಿಯಮ. ಹೌದು. ಸಿಂಗಾಪೂರ್‍ನ ಮಾಲ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿ ಮಾಡಲಾಗಿದೆ.

ಜನ ಇಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಲ್ಪ ಯಡವಟ್ಟಾದರೆ ಅಲ್ಲಿರುವ ಪೊಲೀಸರು ಯಾವುದೇ ಸಮಜಾಯಿಷಿ ಕೇಳುವುದಿಲ್ಲ. ಸೀದಾ ಜೈಲಿಗೆ ಅಟ್ಟುತ್ತಾರೆ. ಆದರೆ, ನಮ್ಮಲ್ಲಿ ಮಾಸ್ಕ್ ಧರಿಸದವರಿಗೆ ದಂಡವಿಧಿಸಿದರೆ ತಿಂಗಳುಗಟ್ಟಲೆ ಚರ್ಚೆಯಾಗುತ್ತದೆ. ಮಾಸ್ಕ್ ಧರಿಸದವರು ಸಿಕ್ಕಿಬಿದ್ದರೆ ಪೊಲೀಸರ ಹಾಗೂ ಮಾರ್ಷಲ್‍ಗಳ ಮೇಲೆ ಹರಿಹಾಯುತ್ತಾರೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡರೆ ಇಲ್ಲಿನ ಸಾರ್ವಜನಿಕರು ನಾನಾ ರೀತಿಯಲ್ಲಿ ಮಾತನಾಡುತ್ತಾರೆ. ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡರೆ ಪೊಲೀಸರು, ಜನಪ್ರತಿನಿಧಿಗಳು ಸಾರ್ವಜನಿಕ ಟೀಕೆಗೆ ಒಳಗಾಗಬೇಕಾಗುತ್ತದೆ. ನಮ್ಮಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ತೋರುತ್ತಲೇ ಬರುತ್ತಿರುವುದರ ಪರಿಣಾಮ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾವಿನ ಪ್ರಮಾಣವೂ ಕೂಡ ಏರಿಕೆಯಾಗುತ್ತಿದೆ.

ಮಾರುಕಟ್ಟೆ, ಮಾಲ್, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಜನರು ಮಾಸ್ಕ್ ಧರಿಸುವುದು , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸುವುದು ಕಡಿಮೆ.  ಜನನಿಬಿಡ ಪ್ರದೇಶಗಳಲ್ಲಂತೂ ಕೇಳುವವರೇ ಇಲ್ಲ. ತಮಗೆ ಇಷ್ಟ ಬಂದಂತೆ ಜನ ವರ್ತಿಸುತ್ತಾರೆ. ಸರ್ಕಾರ ದಂಡ ಹಾಗೂ ಶಿಕ್ಷೆ ವಿಧಿಸಲು ಮುಂದಾದರಂತು ಸರ್ಕಾರಕ್ಕೆ ಹಿಡಿ ಶಾಪವನ್ನೇ ಹಾಕುತ್ತಾರೆ.

ಸಾಮಾನ್ಯ ಪರಿಸ್ಥಿತಿಯಾಗಿದ್ದರೆ ಪರವಾಗಿಲ್ಲ. ಆದರೆ, ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದೆ. ಕೋಟ್ಯಂತರ ಜನ ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ.  ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ 8 ಲಕ್ಷ ಕೊರೊನಾ ಸೋಂಕಿತರಿದ್ದಾರೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿ ಮನೆ ಮನೆಗಳಲ್ಲೂ ಸೋಂಕಿತರನ್ನು ಕಾಣಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದರೆ ಸಾರ್ವಜನಿಕರು ನಿರ್ಲಕ್ಷ್ಯ ಮಾಡುತ್ತಾರೆ. ಸರ್ಕಾರದ ವಿರುದ್ಧವೇ ಹರಿಹಾಯುತ್ತಾರೆ.

ಆದರೆ, ಸಿಂಗಾಪೂರದಂತಹ ಸಣ್ಣ ರಾಷ್ಟ್ರದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಂಡು ನಿಯಮಗಳನ್ನು ಪಾಲಿಸದವರನ್ನು ಜೈಲಿಗೆ ಕಳುಹಿಸುತ್ತಾರೆ. ಅಂತಹ ಕ್ರಮವನ್ನು ನಮ್ಮಲ್ಲೂ ಕೈಗೊಂಡರೆ ಕೊರೊನಾ ನಿಯಂತ್ರಣಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

Facebook Comments