ಕುತೂಹಲ ಕೆರಳಿಸಿದೆ ಅತೃಪ್ತರ ಎಸ್‍ಎಂಕೆ ಭೇಟಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ಕಾಂಗ್ರೆಸ್‍ನ ಅತೃಪ್ತ ಶಾಸಕರು ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ. ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಮತ್ತು ಅತೃಪ್ತ ಶಾಸಕ ಚಿಕ್ಕಬಳ್ಳಾಪುರದ ಕೆ.ಸುಧಾಕರ್ ಅವರು ಇಂದು ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹಾಜರಿದ್ದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಮೇಶ್ ಜಾರಕಿ ಹೊಳಿ ಹಾಗೂ ಸುಧಾಕರ್ ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳು. ಹಾಗಾಗಿ ಮಾತನಾಡಿಸಲು ಬಂದಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಸೌಜನ್ಯದ ಭೇಟಿಯಷ್ಟೆ. ನಾನು ಬಂದಾಗಲೇ ಅವರು ಬಂದಿದ್ದು ಕಾಕತಾಳೀಯ ಎಂದು ಹೇಳಿದ್ದಾರೆ.

ಮಾಜಿ ಸಚಿವ ರಮೇಶ್‍ಜಾರಕಿ ಹೊಳಿ ಈಗಾಗಲೇ ಕಾಂಗ್ರೆಸ್‍ನಿಂದ ಹೊರಗುಳಿದಿದ್ದು, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಆಪರೇಷನ್ ಕಮಲದ ನೇತೃತ್ವವನ್ನೂ ವಹಿಸಿಕೊಂಡಿದ್ದಾರೆ.

ಅತೃಪ್ತ ಶಾಸಕರನ್ನು ಗೋವಾ ರೆಸಾರ್ಟ್‍ಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ನಿನ್ನೆ ರಾತ್ರಿ ಖುದ್ದಾಗಿ ಭೇಟಿ ನೀಡಿ ಅದನ್ನು ಪರಿಶೀಲಿಸಿದ ರಮೇಶ್ ಜಾರಕಿ ಹೊಳಿ, ಇಂದು ಬೆಂಗಳೂರಿಗೆ ಬಂದು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದರು. ಅದೇ ಸಂದರ್ಭದಲ್ಲಿ ಶಾಸಕ ಸುಧಾಕರ್ ಕೂಡ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿತ್ತು.

ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರನ್ನು ಯಡಿಯೂರಪ್ಪ ಅವರೊಂದಿಗೆ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು. ಅವರು ಬಂದು ಹೋದ ನಂತರ ಸುಧಾಕರ್, ರಮೇಶ್ ಜಾರಕಿಹೊಳಿ, ಆರ್.ಅಶೋಕ್ ಅವರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರಾಗಿದ್ದ ಎಸ್.ಎಂ.ಕೃಷ್ಣ ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೂ ಕಾಂಗ್ರೆಸ್ ನಾಯಕರ ಜೊತೆ ಅವರ ಸಂಪರ್ಕ ಉತ್ತಮವಾಗಿದೆ.

ಇಂದು ಎಸ್.ಎಂ.ಕೃಷ್ಣ ಅವರ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು. ಒಂದು ಕಾಲದಲ್ಲಿ ಎಚ್.ಡಿ.ದೇವೇಗೌಡರ ಜೊತೆ ರಾಜಕೀಯ ವೈರತ್ವ ಹೊಂದಿದ್ದ ಎಸ್.ಎಂ.ಕೃಷ್ಣ ಅವರು ಇದ್ದಕ್ಕಿದ್ದಂತೆ ಚುರುಕಾಗಿರುವುದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆಯೇ ಎಂಬ ಪ್ರಶ್ನೆಗಳು ಹುಟ್ಟುಹಾಕಿವೆ.

Facebook Comments