ಧಾರವಾಡದಲ್ಲಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.11- 2019-20ನೆ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಜನವರಿ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಂಘಟಿಸಲು ಉದ್ದೇಶಿಸಲಾಗಿದ್ದು , ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಡಿ.20ರೊಳಗೆ ಪೂರ್ಣಗೊಳಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಸರ್ಕಾರಿ ನೌಕರರಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸ್ಪರ್ಧೆಗಳನ್ನು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾಗುತ್ತದೆ. ಈ ಕ್ರೀಡಾಕೂಟದಲ್ಲಿ ಎಲ್ಲಾ ಖಾಯಂ ನೌಕರರು ಭಾಗವಹಿಸಬಹುದಾಗಿದೆ. ಕ್ರೀಡಾಪಟುಗಳು ಇಲಾಖಾ ಮುಖ್ಯಸ್ಥರಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸಬೇಕು.

ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿನ ಕಚೇರಿ ಸಿಬ್ಬಂದಿ, ಲಿಪಿಕ ನೌಕರರು ಮಾತ್ರ ಭಾಗವಹಿಸಲು ಅವಕಾಶವಿದೆ. ಕ್ರೀಡಾ ಸ್ಪರ್ಧೆ, ಸಂಗೀತ, ನೃತ್ಯ , ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮದೇ ಆದ ಸಲಕರಣೆಗಳನ್ನು ತರಬೇಕಿದೆ. ಫುಟ್ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನಿಸ್ , ಟೆನ್ನಿಸ್, ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್ , ಬ್ಯಾಸ್ಕೆಟ್‍ಬಾಲ್, ಚೆಸ್, ಟೆನ್ನಿಕಾಯ್ಟ್, ಥ್ರೋಬಾಲಂ, ಈಜು, ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ.

ಹಿಂದೂಸ್ತಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಕಥಕ್, ಮಣಿಪುರಿ, ಕೂಚುಪುಡಿ, ಒಡಿಸಿ, ಭರತನಾಟ್ಯ , ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ವಿವರಗಳು ಮತ್ತು ಮಾಹಿತಿಗೆ ಸಂಬಂಧಪಟ್ಟ ಜಿಲ್ಲೆಗಳ ಉಪ / ಸಹಾಯಕ ನಿರ್ದೇಶಕರುಗಳನ್ನು ಅಥವಾ ಇಲಾಖೆಯ ವೆಬ್‍ಸೈಟ್ www.karnataka.gov.in/dyes ಹಾಗೂ ಯುವ ಸಹಾಯವಾಣಿ 18004251448 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Facebook Comments