Friday, April 26, 2024
Homeರಾಜ್ಯ"ಮುಸ್ಲಿಮರನ್ನು ಓಲೈಸಲು ಹಿಂದುಳಿದ ವರ್ಗಕ್ಕೆ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಅನ್ಯಾಯ"

“ಮುಸ್ಲಿಮರನ್ನು ಓಲೈಸಲು ಹಿಂದುಳಿದ ವರ್ಗಕ್ಕೆ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಅನ್ಯಾಯ”

ಬೆಂಗಳೂರು, ಏ.25- ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸದ್ದಿಲ್ಲದೇ ಶಿಫಾರಸು ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಐತಿಹಾಸಿಕ ಅನ್ಯಾಯ ಎಸಗುತ್ತಿದ್ದಾರೆ ಎಂದು ಮಾಜಿ ಸಚಿವ ವಿ.ಸುನೀಲ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ವಿದ್ಯಾರ್ಥಿಗಳು ಹಾಗೂ ಯುವಕರ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಯ ಪಾಲನ್ನು ಮುಸ್ಲಿಮರಿಗೆ ಹಂಚುವ ಜತೆಗೆ ನಗರ- ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಸಂವಿಧಾನದ ಪ್ರಕಾರ ಪಡೆದ ಪಾಲನ್ನೂ ಮುಸ್ಲಿಮರ ಜತೆಗೆ ಹಂಚಿಕೊಳ್ಳಬೇಕಾಗುತ್ತದೆ. ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ ಎಂದು ಪ್ರಶ್ನಿಸಿದ್ದಾರೆ.

ಹಿಂದುಳಿದ ವರ್ಗಗಳ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಂಡು ಅದನ್ನು ಮುಸ್ಲಿಮರಿಗೆ ಹಂಚುವ ಕುತ್ಸಿತ ಹಾಗೂ ತುಷ್ಟೀಕರಣ ರಾಜಕಾರಣದ ಸಂಚು ಇದರಲ್ಲಿ ಅಡಗಿದೆ. ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಣೆಯ ಚಾಂಪಿಯನ್ ತಾನೆಂದು ಸ್ವಯಂ ಘೋಷಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಓಬಿಸಿ ಸಮುದಾಯಕ್ಕಿಂತ ಮುಸ್ಲಿಂ ಓಲೈಕೆಯೇ ಮುಖ್ಯ ಎಂಬುದು ಇದರಿಂದ ಸಾಬೀತಾಗಿದೆ ಎಂದಿದ್ದಾರೆ.

ಓಬಿಸಿ ಸಮುದಾಯದ ಪರ ಮಾತೃ ಹೃದಯ ಪ್ರದರ್ಶನ ಮಾಡುವುದನ್ನು ಬಿಟ್ಟು ಮಲತಾಯಿ ಧೋರಣೆಯನ್ನು ತೋರುತ್ತಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸಕಾಲದಲ್ಲಿ ಈ ಬಗ್ಗೆ ಆಕ್ಷೇಪ ಎತ್ತದೇ ಹೋಗಿದ್ದರೆ ಭವಿಷ್ಯದಲ್ಲಿ ಹಿಂದುಳಿದ ವರ್ಗ ತೆರಬೇಕಿದ್ದ ಬೆಲೆಯನ್ನು ಊಹಿಸಿಕೊಂಡರೂ ಒಂದು ಕ್ಷಣ ಮೈ ನಡುಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹೇಳಿ ಸಿದ್ದರಾಮಯ್ಯನವರೇ, ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ ? ಸಮುದಾಯಕ್ಕೆ ಮಾಡುವ ಈ ಚಾರಿತ್ರಿಕ ಅನ್ಯಾಯದಿಂದ ನಿಮಗೆ ಸಿಗುವ ಲಾಭವೇನು ? ಆಯೋಗಕ್ಕೆ ಈ ಶಿಫಾರಸು ಮಾಡುವ ಮುನ್ನ ಯಾರ ಜತೆಗೆ ಚರ್ಚೆ ನಡೆಸಿದ್ದೀರಿ? ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು ? ಎಂದು ಅವರು ಪ್ರಶ್ನಿಸಿದ್ದಾರೆ.

RELATED ARTICLES

Latest News