ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಪ್ರಧಾನಿಗೆ ಠಾಕ್ರೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ, ಜೂ.16- ಪ್ರಧಾನಿ ನರೇಂದ್ರ ಮೋದಿ ತುಂಬಾ ಧೈರ್ಯಶಾಲಿ ಮತ್ತು ದಿಟ್ಟ ನಾಯಕರು ಎಂದು ಪ್ರಶಂಸಿಸಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ತಾತ್ಕಾಲಿಕ ರಾಮಲಲ್ಲಾ ದೇವಸ್ಥಾನಕ್ಕೆ ತಮ್ಮ ಪುತ್ರ ಆದಿತ್ಯ ಠಾಕ್ರೆ ಮತ್ತು 18 ನೂತನ ಸಂಸದರೊಂದಿಗೆ ಭೇಟಿ ನೀಡಿ ಶ್ರೀರಾಮನಿಗೆ ಉದ್ಧವ್ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್ ತೀರ್ಪನ್ನು ನಿರೀಕ್ಷಿಸುವ ಅಗತ್ಯವಿಲ್ಲ. ಸುಗ್ರೀವಾಜ್ಞೆ ಮೂಲಕ ರಾಮ ಮಂದಿರ ನಿರ್ಮಿಸಿ ಕೋಟ್ಯಂತರ ಜನರ ಮಹದಾಸೆ ಯನ್ನು ಈಡೇರಿಸ ಬೇಕು ಎಂದು ಅವರು ಮೋದಿ ಅವರಿಗೆ ಮನವಿ ಮಾಡಿದರು.

ಪ್ರಧಾನಿ ಮೋದಿ ತುಂಬಾ ಧೈರ್ಯಶಾಲಿಗಳು. ಅವರ ನಾಯಕತ್ವ ಅತ್ಯಂತ ದಿಟ್ಟತನದಿಂದ ಕೂಡಿದೆ. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ತಾವು ನವೆಂಬರ್‍ನಲ್ಲಿ ಇಲ್ಲಿಗೆ ಭೇಟಿ ನೀಡಿದಾಗ ಚುನಾವಣೆಯಲ್ಲಿ ತಮ್ಮ ಪಕ್ಷ ಉತ್ತಮ ಸಾಧನೆ ಮಾಡಿದರೆ ಇಲ್ಲಿಗೆ ಮತ್ತೆ ಬಂದು ವಿಶೇಷ ಪೂಜೆ ಸಲ್ಲಿಸುವುದಾಗಿ ನಾನು ಹರಕೆ ಹೊತ್ತಿದ್ದೆ. ಹೀಗಾಗಿ ನಾನು , ನನ್ನ ಪುತ್ರ ಮತ್ತು 18 ಸಂಸದರು ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವುದಾಗಿ ಶಿವಸೇನೆ ಪರಮೋಚ್ಛ ನಾಯಕರು ಹೇಳಿದರು.

Facebook Comments