ಕರ್ನಾಟಕ ಬಂದ್ ಬೆಂಬಲಿಸಲು ವಾಟಾಳ್, ಸಾ.ರಾ.ಗೋವಿಂದ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕೈಗೊಂಡಿರುವ ಡಿ.5ರ ರಾಜ್ಯ ಬಂದ್‍ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಇಂದಿಲ್ಲಿ ಮನವಿ ಮಾಡಿದರು.

ಬಂದ್ ಯಶಸ್ವಿಗಾಗಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು ಕೈಗೊಂಡಿದ್ದ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಹೊಟೇಲ್ ಮಾಲೀಕರು, ಫುಟ್‍ಪಾತ್ ವ್ಯಾಪಾರಿಗಳು, ಚಲನಚಿತ್ರ ಮಂದಿರದವರು, ಮಾಲ್‍ಗಳು, ವರ್ತಕರು, ಲಾರಿ ಮಾಲೀಕರು, ಆಟೋ-ಟ್ಯಾಕ್ಸಿ ಚಾಲಕರು, ಮಾಲೀಕರು, ಖಾಸಗಿ ಕಂಪೆನಿಗಳು, ಸರ್ಕಾರಿ ನೌಕರರು, ರಸ್ತೆ-ಸಾರಿಗೆ ಸಂಸ್ಥೆಗಳವರು ಸೇರಿದಂತೆ ಎಲ್ಲರೂ ಬಂದ್‍ಗೆ ಬೆಂಬಲ ನೀಡಬೇಕೆಂದು ಈಗಾಗಲೇ ಮನವಿ ಮಾಡಲಾಗಿದೆ.

ಬಹುತೇಕರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಇಂದು ಮತ್ತು ನಾಳೆ ಮತ್ತೊಮ್ಮೆ ಎಲ್ಲರಲ್ಲೂ ಮನವಿ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡಿಗರನ್ನು, ಕನ್ನಡಪರ ಹೋರಾಟಗಾರರನ್ನು ನಿರಂತರವಾಗಿ ಅವಮಾನ ಮಾಡುವ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ತರುವ ತೀರ್ಮಾನ ಕೈಗೊಳ್ಳುವ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ.

ಹಾಗಾಗಿ ಎಲ್ಲರೂ ಬಂದ್‍ಗೆ ಸಹಕರಿಸಬೇಕು. ಯಾರೂ ಮನೆಯಿಂದ ಹೊರಬರಬಾರದು. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ರಾಜ್ಯಾದ್ಯಂತ ಬಂದ್ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ 1600ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಿಸಿವೆ.

ಇಂದು ಸಾರಿಗೆ ನೌಕರರ ಸಂಘದ ಕಾರ್ಮಿಕ ಸಂಘಟನೆಯ ಅನಂತ ಸುಬ್ಬರಾವ್ ಅವರಿಗೆ ಪತ್ರ ಬರೆದು ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.  ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ, ಪ್ರವೀಣ್‍ಕುಮಾರ್ ಶೆಟ್ಟಿ ಅವರು ಬಂದ್‍ಗೆ ಬೆಂಬಲ ನೀಡಿದ್ದಾರೆ.

ಗಡಿಗಳನ್ನು ಬಂದ್ ಮಾಡಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಬಂದ್‍ಗೆ ಬಲ ಬಂದಿದೆ. ವಕೀಲರ ಸಂಘ ಸೇರಿದಂತೆ ಎಲ್ಲರೂ ಬಂದ್‍ಗೆ ಬೆಂಬಲ ಘೋಷಿಸಿದ್ದಾರೆ ಎಂದು ಹೇಳಿದರು. ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ನಾವು ಶಾಂತಿಯುತವಾಗಿ ಬಂದ್ ಮಾಡುತ್ತೇವೆ. ಬಂದ್ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಬಸ್‍ಗಳನ್ನು ಕನ್ನಡಪರ ಹೋರಾಟಗಾರರು ತಡೆಯಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ಹೊಟೇಲ್ ಸಂಘದವರು ನೈತಿಕ ಬೆಂಬಲ ಎಂದು ತಿಳಿಸಿದ್ದಾರೆ. ಜನರೇ ಹೊರಗೆ ಬರಲಿಲ್ಲವೆಂದ ಮೇಲೆ ಹೊಟೇಲ್ ಆಗಲಿ, ಮಾಲ್‍ಗಳಾಗಲಿ ಎಲ್ಲಿ ನಡೆಯುತ್ತವೆ. ಎಲ್ಲರೂ ಬಂದ್ ಮಾಡಿ ಬಂದ್‍ಗೆ ಬೆಂಬಲ ನೀಡಿ ನಾಡಿನ ಹಿತಾಸಕ್ತಿಗೆ ಸ್ಪಂದಿಸಲಿ ಎಂದು ಅವರು ಮನವಿ ಮಾಡಿದರು.

ಡಿ.5ರ ಬಂದ್ ಆಚರಣೆಗಷ್ಟೇ ನಮ್ಮ ಹೋರಾಟ ಸೀಮಿತವಾಗಿಲ್ಲ. ರಾಜಕೀಯ ಕಾರಣಕ್ಕಾಗಿ ರಚನೆಯಾಗಿರುವ ಮರಾಠ ಅಭಿವೃದ್ಧಿ ನಿಗಮವನ್ನು ಸರ್ಕಾರ ಹಿಂಪಡೆಯದಿದ್ದರೆ 5ರ ನಂತರ ಜೈಲ್‍ಭರೋ ಚಳವಳಿ ಹಮ್ಮಿಕೊಳ್ಳುತ್ತೇವೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇಂದು ಮತ್ತು ನಾಳೆ ಬಂದ್‍ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಪ್ರಚಾರಾಂದೋಲನ ನಡೆಸುತ್ತೇವೆ. ಬಹುತೇಕ ಎಲ್ಲರೂ ಬೆಂಬಲ ಘೋಷಿಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮದ ಕಾರ್ಯಾಲಯ ಸ್ಥಾಪನೆಗೆ ಅವಕಾಶ ಕೊಡುವುದು, ಅದಕ್ಕೆ ಮಂತ್ರಿಸ್ಥಾನ ನೀಡಿ ಮಾನ್ಯತೆ ನೀಡುವುದು ನಾಡಿನ ಹಿತಾಸಕ್ತಿಗೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ಕಾರ್ಯಾಲಯ ಪ್ರಾರಂಭಿಸಬಾರದು. ನಿಗಮವನ್ನು ಹಿಂಪಡೆಯಬೇಕು. ಸರ್ಕಾರ ಹಠಮಾರಿ ಧೋರಣೆ ಕೈಬಿಡಬೇಕು ಎಂದು ಒತ್ತಾಯಿಸಿದರು. ಗಿರೀಶ್‍ಗೌಡ, ಮಂಜುನಾಥ್ ದೇವು ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಪ್ರಚಾರಾಂದೋಲನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Facebook Comments