ವಿಧಾನಸೌಧದ ಪತ್ರಕರ್ತರ ಕೋಣೆಗೂ ಗ್ರಹಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿಧಾನಸಭೆಯ ಸಭಾಂಗಣದ ಪತ್ರಕರ್ತರ ವೇದಿಕೆಯಿಂದ ಪತ್ರಕರ್ತರನ್ನು ಹೊರಹಾಕಿ ಶಾಸಕರ ಆಪ್ತ ಸಹಾಯಕರಿಗೆ ಸ್ಥಳಾವಕಾಶ ಮಾಡಿಕೊಡುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮೆರಾಗಳನ್ನು ನಿಷೇಧಿಸಿ ವಿವಾದಕ್ಕೀಡಾಗಿ ಅದನ್ನು ಜೀರ್ಣಿಸಿಕೊಂಡು ಯಶಸ್ವಿಯಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮತ್ತೊಂದು ವಿವಾದಿತ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ವಿಧಾನಸಭೆ ನಿರ್ಮಾಣವಾದ ಬಳಿಕ ಸಭಾಂ ಗಣದ ಮಧ್ಯ ಭಾಗದಲ್ಲಿ ಶಾಸಕರಿಗೆ ಸ್ಪೀಕರ್ ಅವರ ಬಲಭಾಗದಲ್ಲಿ ಅಧಿಕಾರಿಗಳಿಗೆ, ಎಡಭಾಗದಲ್ಲಿ ಪತ್ರಕರ್ತರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ವಿಧಾನ ಪರಿಷತ್‍ನಲ್ಲೂ ಇದೇ ರೀತಿ ಆಸನ ವ್ಯವಸ್ಥೆ ಇದೆ. ಈ ಹಿಂದೆ ಯಾವ ಸರ್ಕಾರಗಳೂ ಕೂಡ ಪತ್ರಕರ್ತರನ್ನು ನೆಲಮಹಡಿಯ ಸಭಾಂಗಣದಿಂದ ಹೊರಗಿಟ್ಟು ಅಧಿವೇಶನ ನಡೆಸಿದ ಉದಾಹರಣೆ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಪತ್ರಕರ್ತರನ್ನು ಸಭಾಂಗಣದಿಂದ ಮೊದಲ ಮಹಡಿಯ ವೀಕ್ಷಕರ ಗ್ಯಾಲರಿಗೆ ಸ್ಥಳಾಂತರಿಸುವ ಪ್ರಸ್ತಾವನೆ ಚರ್ಚೆಗೆ ಬಂದಿದೆ.

ಶಾಸಕರುಗಳ ಆಪ್ತ ಸಹಾಯಕರು ಮತ್ತು ಸಂಸದರಿಗೆ ಜಾಗ ಮಾಡಿಕೊಡುವ ಸಲುವಾಗಿ ಈ ಪ್ರಸ್ತಾವನೆಯನ್ನು ಚರ್ಚೆಗೆ ಬಿಡಲಾಗಿದೆ. ಅಧಿವೇಶನದ ವೇಳೆ ಸಂಸದರು ಪತ್ರಕರ್ತರ ಗ್ಯಾಲರಿಗೆ ಬಂದು ಕೂರುವುದು ಸಾಮಾನ್ಯ. ಇನ್ನು ಕೆಲವರು ಮೊದಲ ಮಹಡಿಯ ವೀಕ್ಷಕರ ಗ್ಯಾಲರಿಯಲ್ಲೂ ಕುಳಿತು ಅಧಿವೇಶನ ವೀಕ್ಷಿಸುತ್ತಾರೆ. ಸಭಾಂಗಣದ ಪತ್ರಕರ್ತರ ಗ್ಯಾಲರಿಯಲ್ಲಿ ವಿರೋಧ ಪಕ್ಷದ ನಾಯಕರ ಕಚೇರಿಯ ಆಪ್ತ ಸಹಾಯಕರು ಹಾಗೂ ಸಿಬ್ಬಂದಿಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುತ್ತದೆ.

ಶಾಸಕರ ಆಪ್ತ ಸಹಾಯಕರಿಗೆ ವಿಧಾನಸಭೆಯ ಒಳಗೆ ಪ್ರವೇಶವಿರಲಿಲ್ಲ. ಈಗ ಶಾಸಕರ ಆಪ್ತ ಸಹಾಯಕರನ್ನು ಅಧಿವೇಶನದೊಳಗೆ ಬರಲು ಅವಕಾಶ ಮಾಡಿಕೊಡುವ ಸಲುವಾಗಿ ಪತ್ರಕರ್ತರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿಗಳಿವೆ.

ಈ ಹಿಂದೆ ಮಾಧ್ಯಮಗಳ ಕ್ಯಾಮೆರಾಗಳು ವಿಧಾನಸಭೆಯಲ್ಲಿ ಚಿತ್ರೀಕರಿಸುತ್ತಿದ್ದಾಗ ಕೆಲ ಶಾಸಕರು ನೀಲಿಚಿತ್ರ ನೋಡುತ್ತಿದ್ದುದು, ಅಶ್ಲೀಲ ಚಿತ್ರಗಳ ವೀಕ್ಷಣೆ ಸೇರಿದಂತೆ ಹಲವಾರು ವಿವಾದಗಳು ಬೆಳಕಿಗೆ ಬಂದಿದ್ದವು. ಇದರಿಂದಾಗಿ ಮಾಧ್ಯಮಗಳ ಕ್ಯಾಮೆರಾಗಳನ್ನು ಹೊರಗಿಟ್ಟು ಇತ್ತೀಚೆಗೆ ಮೂರು ದಿನಗಳ ಅಧಿವೇಶನ ನಡೆಸಲಾಯಿತು.

ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಾಧ್ಯಮಗಳ ಪರವಾಗಿ ಮಾತನಾಡಿದರೂ ನ್ಯಾಯ ಸಿಗಲಿಲ್ಲ. ಈಗ ಪತ್ರಕರ್ತರನ್ನು ಸಭಾಂಗಣದಿಂದ ಹೊರಗೆ ಹಾಕಿ ಮೊದಲ ಮಹಡಿಯಲ್ಲಿ ಕೂರಿಸುವ ಪ್ರಯತ್ನ ನಡೆಯುತ್ತಿದೆ.

ವಿಧಾನಸಭೆಗೆ ಮಾಧ್ಯಮಗಳ ನಿರ್ಬಂಧವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ವಿರೋಧಿಸಿದ್ದಾರೆ. ಕ್ಯಾಮೆರಾಗಳನ್ನು ಹೊರಹಾಕುವ ಅಗತ್ಯವಿರಲಿಲ್ಲ. ಸದನದಲ್ಲಿ ಮಾಧ್ಯಮದವರು ಕೆಲಸ ಮಾಡುವುದರಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.

ಕೆಲವರಿಗೆ ವೈಯಕ್ತಿಕವಾಗಿ ತೊಂದರೆಯಾಗಬಹುದು ಮತ್ತು ಅವರ ಹುಳುಕುಗಳ ಬಗ್ಗೆ ತೋರಿಸಬಹುದು ಎಂಬ ಆತಂಕದಿಂದ ಮಾಧ್ಯಮಗಳನ್ನು ನಿಷೇಧ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪೀಕರ್ ಅವರಿಗೆ ಹೇಳಿ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments