ಕಣ್ತಪ್ಪಿಸಿ ಈ ಗ್ರಾಮಕ್ಕೆ ಬಂದ್ರೆ ಬೀಳುತ್ತೆ 10,000ರೂ. ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ, ಜು.8- ಮಹಾಮಾರಿ ಕೊರೊನಾ ಹಳ್ಳಿಹಳ್ಳಿಗಳಿಗೂ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಜನರನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮದ ಜನ ದಂಡ ಹಾಕುವ ಕ್ರಮಕ್ಕೆ ಮುಂದಾಗಿದ್ದಾರೆ.

ಹೊರಗಡೆಯಿಂದ ಗ್ರಾಮಕ್ಕೆ ಬಂದವರಿಗೆ ಬರೋಬ್ಬರಿ 10,000ರೂ. ದಂಡ ಹಾಗೂ ಕಣ್ತಪ್ಪಿಸಿ ಬಂದವರನ್ನು ಹಿಡಿದುಕೊಟ್ಟವರಿಗೆ 2000ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಏನೇ ಕ್ರಮ ಕೈಗೊಂಡರೂ, ಅಧಿಕಾರಿಗಳು ಯಾವುದೇ ಮಾರ್ಗಸೂಚಿ ಹೊರಡಿಸಿದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಗಲ್ಲಿಗಲ್ಲಿಗೂ ಹರಡುತ್ತಿದೆ. ಹೀಗಾಗಿ ಗ್ರಾಮಗಳವರೇ ತಮಗೆ ತೋಚಿದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹುಣುಜೂರಿನ ಮೂಕನಪಾಳ್ಯದ ಗ್ರಾಮಸ್ಥರು ಡಂಗೂರ ಸಾರಿಸಿ ಕೇರಳ, ತಮಿಳುನಾಡು, ನಮ್ಮ ರಾಜ್ಯದ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್ ಆಗಿವೆ. ಅಲ್ಲಿಂದ ಹಾಗೂ ಮೈಸೂರಿನಿಂದ ಯಾರಾದರೂ ಗ್ರಾಮಕ್ಕೆ ಬಂದರೆ 10,000ರೂ. ದಂಡ ಹಾಕುತ್ತೇವೆ. ಹಿಡಿದುಕೊಟ್ಟರೆ 2000ರೂ. ಬಹುಮಾನ ಕೊಡಲಾಗುವುದು ಎಂದು ಘೋಷಿಸಿದ್ದಾರೆ.

ದಂಡಕ್ಕೆ ಹೆದರಿ ಜನ ಊರ ಕಡೆ ತಲೆ ಹಾಕಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗ್ರಾಮಸ್ಥರು ಯಾವುದೇ ವ್ಯಕ್ತಿ, ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರೆ ಅಂತಹವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಡುವೆ ಈಗ ಬೆಂಗಳೂರಿನಿಂದ ಸಾಕಷ್ಟು ಜನ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇಂತಹವರಿಗೆ ಸ್ಥಳೀಯ ಶಾಸಕರೂ ಕೂಡ ಎಚ್ಚರಿಕೆ ನೀಡಿದ್ದು, ಬೆಂಗಳೂರಿನಿಂದ 3800ಕ್ಕೂ ಹೆಚ್ಚು ಜನ ಬಂದಿದ್ದಾರೆ.

ಆದರೆ, ಅವರು ಕಡ್ಡಾಯವಾಗಿ ಖುದ್ದಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆಗೆ ಒಳಗಾಗದೆ ಬಚ್ಚಿಡುವ ಪ್ರಯತ್ನ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ಈ ಬಾರಿ ಯಾರೂ ಕೂಡ ಮಾರಿಹಬ್ಬ ಆಚರಿಸುವುದು ಬೇಡ. ಇದರಿಂದ ರೋಗ ಉಲ್ಬಣವಾಗುತ್ತದೆ ಎಂದು ಮನವಿ ಮಾಡಿದ್ದಾರೆ.  ಮಲೈ ಮಹದೇಶ್ವರನ ಸನ್ನಿಧಿಯಲ್ಲಷ್ಟೇ ತಪಾಸಣೆ ನಡೆಯುತ್ತಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಬೆಟ್ಟದಲ್ಲಿ ಓಡಾಡಿ ನಂತರ ದರ್ಶನಕ್ಕೆ ಹೋಗುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ.

ಇಂದಿನಿಂದಲೇ ಮಾದಪ್ಪನ ಬೆಟ್ಟದಲ್ಲೂ ಕೂಡ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಚೆಕ್‍ಪೆÇೀಸ್ಟ್‍ನಲ್ಲೇ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಬೇಕು. ರೋಗ ಲಕ್ಷಣ ಇರುವವರನ್ನು ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

Facebook Comments