ಸರ್ಕಾರಿ ನೌಕರರಿಗೂ ವರ್ಕ್ ಫ್ರಮ್ ಹೋಂ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೂ ವರ್ಕ್ ಫ್ರಮ್ ಹೋಂ( ಮನೆಯಿಂದಲೇ ಕೆಲಸ) ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಬಹುತೇಕ ನೌಕರರು ಕರ್ತವ್ಯಕ್ಕೆ ಬರಲು ಹಿಂದೇತು ಹಾಕುತ್ತಿದ್ದಾರೆ. ಕೆಲವು ಸಿಬ್ಬಂದಿಗಳಿಗೆ ಈಗಾಗಲೇ ಪಾಸಿಟಿವ್ ಬಂದಿರುವ ಕಾರಣ ಎಲ್ಲಿ ತಮಗೂ ಹಬ್ಬಿ ಬಿಡುತ್ತದೆಯೋ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ.

ಹೀಗಾಗಿ ನೌಕರರು ಖಾಸಗಿ ಕಂಪನಿಗಳಂತೆ ತಮಗೂ ಕೂಡ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗುವಂತಹ ನಿಯಮವನ್ನು ಜಾರಿ ಮಾಡುವಂತೆ ಸಂಘದ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಈಗಾಗಲೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂಎಸ್ ಬಿಲ್ಡಿಂಗ್) ಸೇರಿದಂತೆ ಅನೇಕ ಕಚೇರಿಗಳಲ್ಲಿ ನೌಕರರಿಗೆ ಸೋಂಕು ಕಾಣಿಸಿಕೊಂಡಿದೆ.

ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ ಇಲಾಖೆಗಳಿಗೆ ಸಾವಿರಾರು ಜನರು ಬಂದು ಹೋಗುತ್ತಾರೆ. ಯಾರಿಗೆ ಸೋಂಕು ಹಬ್ಬಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಎಷ್ಟೇ ಎಚ್ಚರಿಕೆ ವಹಿಸಿದರೂ ಅಂಥವರಿಗೂ ಸೋಂಕು ಹಬ್ಬಿರುವುದು ತಪ್ಪಿಲ್ಲ. ಇನ್ನು ನಮ್ಮಂತವರ ಗತಿಯೇನು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

ಕೆಲವು ನೌಕರರು ಆರೋಗ್ಯದ ನೆಪವೊಡ್ಡಿ ಕರ್ತವ್ಯಕ್ಕೆ ಹಾಜರಾಗುವುದನ್ನು ಸ್ಥಗಿತ ಮಾಡಿದ್ದಾರೆ. ಇನ್ನು ಕೆಲವು ನೌಕರರು ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರವನ್ನು ತೊರೆದು ಸ್ವಗ್ರಾಮದತ್ತ ಮುಖ ಮಾಡಿದ್ದಾರೆ.  ಈ ಮೊದಲು ಲಾಕ್‍ಡೌನ್ ಇದ್ದ ವೇಳೆ ಪ್ರಮುಖ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ಹೊರತುಪಡಿಸಿ ಎಲ್ಲರೂ ಕಚೇರಿಗೆ ಬರಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಸೂಚಿಸಿತ್ತು.

ಆದರೆ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆಯಾದ ನಂತರ ಎಲ್ಲ ಇಲಾಖೆಗಳ ಸಿಬ್ಬಂದಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಿತು. ಹೀಗಾಗಿ ಮೇ ತಿಂಗಳ ಮಧ್ಯ ಭಾಗದಿಂದ ನೌಕರರು ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು.

ಇದೀಗ ಕೊರೊನಾ ಸೋಂಕು ಶರವೇಗದಲ್ಲಿ ಹಬ್ಬುತ್ತಿರುವುದರಿಂದ ಪ್ರಾಣ ಭಯದಲ್ಲಿ ಕಚೇರಿಗೆ ಬರುತ್ತಿದ್ದಾರೆ. ಪ್ರತಿದಿನ ಹೀಗೆ ಜೀವ ಭಯದಲ್ಲಿ ಕೆಲಸ ಮಾಡುವ ಬದಲು ಮನೆಯಿಂದಲೇ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.  ಈಗಾಗಲೇ ಬೇರೆ ಬೇರೆ ಇಲಾಖೆಗಳಲ್ಲಿ ಮನೆಯಿಂದಲೇ ಕೆಲಸ ಮಾಡಲು ಸೂಚನೆ ಕೊಡಲಾಗಿದೆ. ನಮಗೂ ಕೂಡ ಇದೇ ನಿಯಮವನ್ನು ಜಾರಿ ಮಾಡಲಿ ಎಂಬುದು ಬಹುತೇಕರ ಒತ್ತಾಯ.

ಈ ಸಂಬಂಧ ಸರ್ಕಾರಿ ನೌಕರರ ಸಂಘ ಸಭೆ ಸೇರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗುವಂತೆ ಅವಕಾಶ ನೀಡಬೇಕೆಂದು ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯ್‍ಭಾಸ್ಕರ್‍ಗೆ ಮನವಿ ಮಾಡಿದ್ದಾರೆ.  ನಮ್ಮ ನೌಕರರು ಗಾಬರಿಗೊಂಡು ಕಚೇರಿಗೆ ಬರಲು ಹೆದರುತ್ತಿದ್ದಾರೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಇಂತಹ ಕಡೆಯೇ ವೈರಸ್ ಆವರಿಸಿರುವುದರಿಂದ ಎಲ್ಲರಿಗೂ ಜೀವ ಭಯ ಕಾಡುತ್ತಿದೆ.

ಹೀಗಾಗಿ ಮುಖ್ಯ ಕಾರ್ಯದರ್ಶಿಗೆ ವರ್ಕ್ ಫ್ರಮ್ ನೀತಿ ಜಾರಿ ಮಾಡುವಂತೆ ಕೋರಿದ್ದೇವೆ.  ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

Facebook Comments